Wednesday, October 04, 2006

ಕನ್ನಡ ಟೀವಿ ವಾಹಿನಿಗಳು....

ಈ ದಿನಗಳಲ್ಲಿ ಕನ್ನಡ ಟೀವಿ ಕ್ಷೇತ್ರದಲ್ಲಿ ಭಾರಿ ಬದಲಾವಣೆಗಳಾಗುತ್ತಿವೆ. ಹೊಸ ಹೊಸ ವಾಹಿನಿಗಳು ಪ್ರಾರಂಭವಾಗುತ್ತಿವೆ. ಹೊಸ ಬಗೆಯ ಕಾರ್ಯಕ್ರಮಗಳು. ಈಗ ಕನ್ನಡಿಗರು ಕೇವಲ ದೂರದರ್ಶನದ ಮೇಲೆ ಅವಲಂಬಿತವಾಗಿರಬೇಕಿಲ್ಲ.

ಕನ್ನಡ ಟೀವಿ ಜಗತ್ತಿಗೆ ಉದಯ ಟೀವಿ ಬಹಳ ಮೊದಲೇ ಬಂದಿತ್ತು. ಆದರೆ ಕಾರ್ಯಕ್ರಮಗಳ ಗುಣಮಟ್ಟ (ಈಗಲೂ) ಅಷ್ಟಕ್ಕಷ್ಟೆ. ಆದರೆ ಕನ್ನಡ ಟೀವಿಯಲ್ಲಿ ಗುಣಮಟ್ಟದ ಕಾರ್ಯಕ್ರಮಗಳನ್ನು ಮೊದಲು ತಂದಿದ್ದು ಈ ಟೀವಿ. ದೂರದರ್ಶನದಲ್ಲಿ 'ಮಾಯಮೃಗ'ದಂತಹ ಧಾರಾವಾಹಿ ಪ್ರಸಾರವಾಗುತ್ತಿದ್ದರೂ ದೂರದರ್ಶನ ವಾಹಿನಿ ಸಮಗ್ರವಾಗಿತ್ತಿಲ್ಲ.

ಈ ಟೀವಿ ಮೊದಲಿನಿಂದಲೂ ಕೂಡ ಒಳ್ಳೆಯ, ಗುಣಮಟ್ಟದ, ಕನ್ನಡಿಗರಿಗೆ ಹತ್ತಿರವಾದ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿದೆ. ಬಹುಶಃ ಟೀವಿಯವರ ಧ್ಯೇಯ 'ಕನ್ನಡಿಗರಿಂದ, ಕನ್ನಡಿಗರಿಗಾಗಿ' ಎಂಬಂತಿದೆ. ಆಂಧ್ರದ ರಾಮೋಜಿ ರಾವ್ ಈ ಟೀವಿಯ ಒಡೆಯರಾಗಿದ್ದರೂ, ಟೀವಿ ಎಂದೂ ತೆಲುಗಿನ ಟೀವಿಯ ಕಾರ್ಯಕ್ರಮಗಳನ್ನು ಕನ್ನಡಕ್ಕೆ ಭಟ್ಟಿ ಇಳಿಸಲಿಲ್ಲ. ಉದಯ ಟೀವಿ ತಮಿಳಿನ ಧಾರಾವಾಹಿಗಳನ್ನು, ಗೇಮ್ ಶೋಗಳನ್ನು ಕನ್ನಡಕ್ಕೆ ಭಟ್ಟಿಯಿಳಿಸಿದೆ.

ಈ ಟೀವಿಯ ಧಾರಾವಾಹಿಗಳ ಗುಣಮಟ್ಟ ಕೂಡ ಹೆಚ್ಚು. ಮಧ್ಯಾಹ್ನದಿಂದ ಪ್ರಾರಂಭವಾಗುವ ಧಾರಾವಾಹಿಗಳು ಒಂದಕ್ಕಿಂತ ಒಂದು ಚೆನ್ನಾಗಿವೆ. ಅವುಗಳ ಕಥೆ, ನಿರ್ದೇಶನ ಸೊಗಸಾಗಿವೆ. ನಟ-ನಟಿಯರ ಅಭಿನಯವೂ ಚೆನ್ನಾಗಿದೆ. ನನಗೆ ಇಷ್ಟವಾದ ಕೆಲವು ಧಾರಾವಾಹಿಗಳು 'ಪಾ ಪ ಪಾಂಡು', 'ಮಳೆಬಿಲ್ಲು', 'ಸಿಲ್ಲಿ ಲಲ್ಲಿ', 'ಮುಕ್ತ', 'ಪ್ರೀತಿ ಇಲ್ಲದ ಮೇಲೆ', 'ಗುಪ್ತಗಾಮಿನಿ'.... 'ಕ್ರೈಂ ಡೈರಿ' ಕೂಡ ಕೆಲವೊಮ್ಮೆ ಚೆನ್ನಾಗಿರುತ್ತದೆ. ರವಿ ಬೆಳಗೆರೆ ಅವರ ಹಿನ್ನೆಲೆ ನಿರೂಪಣೆ ಬಹಳ ಸೊಗಸು. ಬಹುಶಃ ಟೀವಿಯಲ್ಲಿ ಧಾರಾವಾಹಿಗಳಿಗಿಂತ ಅದರ ಹೆಚ್ಚು ಜನಪ್ರಿಯ ಕಾರ್ಯಕ್ರಮ 'ಈ ಟೀವಿ ನ್ಯೂಸ್'. ಅದರ ಸಮಗ್ರತೆ ಮೆಚ್ಚಬೇಕಾದದ್ದು. ಕರ್ನಾಟಕದ ಮೂಲೆ ಮೂಲೆಗಳಿಂದ ಸುದ್ದಿಯನ್ನು ಒಳಗೊಂಡಿರುತ್ತದೆ. ಜತೆಗೆ ಸುದ್ದಿಯ ಸಮಗ್ರ ಮಾಹಿತಿ ಕೂಡ ಲಭ್ಯ. ಟೀವಿಯ ಈ ಪ್ರಯತ್ನವನ್ನು ಬೇರೆ ವಾಹಿನಿಗಳೂ ಕೂಡ ಪಾಲಿಸಬೇಕು. ಗಂಟೆಗೊಮ್ಮೆ ಪ್ರಸಾರವಗುವ ಮುಖ್ಯ ಸುದ್ದಿಗಳೂ ಮೆಚ್ಚುವಂತಹದ್ದು. ಉದಯ ಟೀವಿಯ ನ್ಯೂಸ್ ಕಳಪೆ ಮಟ್ಟದ್ದು.

ಈ ಟೀವಿಯಲ್ಲಿ ಪ್ರಸಾರವಾದ 'ರಸ ಋಷಿಗೆ ನಮಸ್ಕಾರ', 'ಬೇಂದ್ರೆ ಮಾಸ್ತರ'ರಿಗೆ ನಮಸ್ಕಾರ ಕಾರ್ಯಕ್ರಮ ನಮ್ಮ ಕವಿಗಳ ಜೀವನವನ್ನು ಕನ್ನಡಿಗರಿಗೆ ಪರಿಚಯಿಸಿದವು. 'ಎದೆ ತುಂಬಿ ಹಾಡುವೆನು', 'ಹಾಡಿಗೊಂದು ಹಾಡು', 'ಮಾಯ ಬಜಾರ್', 'ಪಂಚತಂತ್ರ', 'ಒಂದು ಮಾತು' ಬಹಳ ಚೆನ್ನಾಗಿವೆ. ಹೊಸದಾಗಿ ಪ್ರಸಾರವಗುತ್ತಿರುವ 'ರಾಗ ರಂಜಿನಿ' ಜನರಿಗೆ ಸಂಗೀತದ ಬಗ್ಗೆಗಿನ ಜ್ಞಾನವನ್ನು ಹೆಚ್ಚಿಸುತ್ತಿದೆ.

ಈ ಟೀವಿ ಕೇವಲ ಧಾರಾವಾಹಿ, ಸುದ್ದಿಗಳಿಗಷ್ಟೆ ಅಲ್ಲ, ಅದರಲ್ಲಿ ಪ್ರಸಾರವಗುವ 'ನೇರ ಪ್ರಸಾರ'ದ ಕಾರ್ಯಕ್ರಮ ಬಹಳ ಸುಂದರ. ಶೃಂಗೇರಿಯ ನವರಾತ್ರಿ ಕಾರ್ಯಕ್ರಮಗಳು, ಉಡುಪಿಯ ಕೃಷ್ಣ ಜನ್ಮಾಷ್ಟಮಿ, ಮಂತ್ರಾಲಯದ ರಾಘವೇಂದ್ರರ ಆರಾಧನೆ, ಶ್ರವಣಬೆಳಗೊಳದ ಮಹಮಸ್ತಕಾಭಿಷೇಕ - ಎಲ್ಲವನ್ನೂ ಕೂಡ ಸೊಗಸಾಗಿ ಪ್ರಸಾರ ಮಾಡಿತು. ಶ್ರೀನಿವಾಸ ಪ್ರಭು, ಅಪರ್ಣರವರ ನಿರೂಪಣೆ ಆ ನೇರ ಪ್ರಸಾರಗಳಿಗೆ ಮೆರಗು ಕೊಟ್ಟಿದೆ. ಉದಯದವರು ಸನ್ ಟೀವಿಯ ಧಾರಾವಾಹಿ, ಗೇಮ್ ಶೋಗಳನ್ನು ಕನ್ನಡಕ್ಕೆ ತರುವ ಬದಲು ಕನ್ನಡಿಗರಿಗೆ ಬೇಕಾದ ಕಾರ್ಯಕ್ರಮಗಳನ್ನು ಹೆಚ್ಚಾಗಿ ಪ್ರಸಾರ ಮಾಡಬೇಕು. ಈ ಟೀವಿ ಮುಂದೆ ಬರುವ ಎಲ್ಲಾ ಕನ್ನಡ ವಾಹಿನಿಗಳಿಗೆ, ಕನ್ನಡಿಗರಿಗೆ ಎಂತಹ ಕಾರ್ಯಕ್ರಮಗಳು ಬೇಕು ಎಂಬುದನ್ನು ತೋರಿಸಿದೆ.

ಹೊಸದಾಗಿ ಬಂದಿರುವ ಝೀ ಕನ್ನಡ ಟೀವಿಯ ಹಾದಿಯಲ್ಲೆ ನಡೆದಿದೆ. ಹೊಸ ಹೊಸ ಬಗೆಯ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿದೆ. ಮುಂದೆ ಝೀ ಕನ್ನಡಕ್ಕೆ ಒಳ್ಳೆ ಭವಿಷ್ಯಯಿದೆ.

ಯಾವುದೇ ವಾಹಿನಿ ತನ್ನ ಕಾರ್ಯಕ್ರಮಗಳಲ್ಲಿ ಹೊಸತನವನ್ನು ಕಾಪಾಡಿಕೊಳ್ಳಬೇಕು. ಆಗಲೇ ಅದು ತನ್ನ ಸ್ಥಾನವನ್ನು ಕಾಪಾಡಿಕೊಳ್ಳುವುದಕ್ಕೆ ಸಾಧ್ಯ.

ಒಳ್ಳೊಳ್ಳೆಯ, ವಿನೂತನ ಕಾರ್ಯಕ್ರಮಗಳನ್ನು ನೀಡುತ್ತಿರುವ ಟೀವಿಗೆ ನನ್ನ ಧನ್ಯವಾದ.

Read more

2 Comments:

Blogger Puthali said...

hey...i think you will set the record for max posts on da 1st day of blogging itself...gr8 going keep it up... :)
'n yep...rightly said E-tv is by far da best kannada-channel...da amusing thing is E-tv is frm Andhra 'n Udaya frm Tamilnadu....but still it has managed to remain native to karnataka unlike udaya...

7:09 PM  
Blogger Vinay said...

yes...

I hope this should not be the first day enthu.. I would like to write more..

7:41 PM  

Post a Comment

Subscribe to Post Comments [Atom]

<< Home