Sunday, February 04, 2007

ಆತಂಕ

ನಾಳೆ ಅಂದರೆ, ಫೆಬ್ರವರಿ ೫ರಂದು ಕಾವೇರಿ ನ್ಯಾಯ ಮಂಡಳಿಯ ಕಾವೇರಿ ನದಿ ನೀರು ಹಂಚಿಕೆಯ ತೀರ್ಪು ಹೊರಬೀಳಲಿದೆ. ೨ ದಶಕಗಳ ವಾದ-ಪ್ರತಿವಾದಗಳ ನಂತರ ಬರಲಿರುವ ತೀರ್ಪು ಕರ್ನಾಟಕ, ತಮಿಳುನಾಡು ಜನರಲ್ಲಿ ಆತಂಕ ಮೂಡಿಸಿದೆ.

ಕಾವೇರಿ ಕರ್ನಾಟಕದ ಮೈಸೂರು ಪ್ರಾಂತ್ಯ ಹಾಗೂ ತಮಿಳುನಾಡಿನ ಜೀವ ನದಿಯಾಗಿದೆ. ಎರಡೂ ರಾಜ್ಯಗಳ ಲಕ್ಷಾಂತರ ಜನರು ಕಾವೇರಿಯನ್ನೇ ನಂಬಿ ಬೇಸಾಯ ಮಾಡುತ್ತಿದ್ದಾರೆ. ಕಾವೇರಿ ನದಿಯ ನೀರಾವರಿಯಿಂದ ಒಂದು ಕಾಲದಲ್ಲಿ ಬರಡಾಗಿದ್ದಂತಹ ಭೂಮಿ ಇಂದು ಭತ್ತದ ಕಣಜಗಳಾಗಿವೆ. ಹಸಿರನ್ನು ಹೊದ್ದುಕೊಂಡಿವೆ.

ಆದರೆ, ಎರಡೂ ರಾಜ್ಯಗಳೂ ಕಾವೇರಿ ನೀರಾವರಿ ಪ್ರದೇಶವನ್ನು ಹೆಚ್ಚಿಸುತ್ತಲೇ ಇವೆ. ಈ ಪ್ರದೇಶಗಳಿಗೆಲ್ಲಾ ನೀರುಣಿಸುವಷ್ಟು ಕಾವೇರಿಯಲ್ಲಿ ನೀರಿದೆಯೇ? ವರ್ಷದಲ್ಲಿ ಕಾವೇರಿ ಜಲಾನಯನ ಪ್ರದೇಶದಲ್ಲಿ ಅತಿವೃಷ್ಟಿಯಾದರೆ ಮಾತ್ರ ಕಾವೇರಿ ಕರ್ನಾಟಕ, ತಮಿಳುನಾಡುಗಳ ನೀರಿನ ದಾಹವನ್ನು ತೀರಿಸಬಲ್ಲಳು. ಮಳೆ ಕಡಿಮೆಯಾಯಿತೆಂದರೆ, ಮತ್ತೆ ಎರಡೂ ರಾಜ್ಯಗಳ ಮಧ್ಯೆ ಕಚ್ಚಾಟ. ಇಬ್ಬರೂ ಕಾವೇರಿ ತಮ್ಮ ಹಕ್ಕು ಎಂದು ಕೂಗಾಡುತ್ತಾರೆ. ಕೆಲವೊಮ್ಮೆ ಈ ಜಗಳ ತಾರಕ್ಕೇರಿರುವುದೂ ಉಂಟು. ಇದಕ್ಕೆ ಕೆಲವೊಂದು ಸಾರಿ ರಾಜಕಾರಣಿಗಳೂ ಕಾರಣ. ತಮ್ಮ ತಮ್ಮ ರಾಜ್ಯದ ಜನತೆಗೆ ತಮ್ಮ ನಿಷ್ಠೆಯನ್ನು ತೋರಿಸಲು ಪ್ರಚೋದನಕಾರಿ ಹೇಳಿಕೆಗಳನ್ನು ನೀಡುತ್ತಾರೆ. ತಮಿಳುನಾಡಿನ ಹಿಂದಿನ ಮುಖ್ಯಮಂತ್ರಿ ಜಯಲಲಿತಾ ತಾವು ಅಪ್ಪಟ ತಮಿಳು ಹೆಣ್ಣು ಎಂದು ತೋರಿಸಲು ಸುಪ್ರೀಂಕೋರ್ಟಿಗೂ ಹೋಗಿದ್ದಾರೆ.

ಆದರೆ, ಈ ಕಾವೇರಿ ಜಗಳಕ್ಕೆ ನಿಜವಾದ ಕಾರಣವೇನು ? ಮೊದಲೇ ಹೇಳಿದಂತೆ ಹೆಚ್ಚುತ್ತಿರುವ ನೀರಾವರಿ ಪ್ರದೇಶ ಒಂದು ಕಾರಣ. ಇನ್ನೊಂದು ಮುಖ್ಯ ಕಾರಣ, ಎರಡೂ ರಾಜ್ಯಗಳ ನೀರಾವರಿ ಪ್ರದೇಶದಲ್ಲಿ ಭತ್ತವನ್ನೇ ಬೆಳೆಯುವುದು. ಮಂಡ್ಯದಲ್ಲಿ ಕಬ್ಬನ್ನೂ ಬೆಳೆಯುತ್ತಾರೆ. ಎರಡೂ ಬೆಳೆಗಳಿಗೂ ಹೆಚ್ಚು ನೀರು ಬೇಕು. ಮಳೆ ಕಡಿಮೆಯಾದರೆ ಹೇಗೆ ತಾನೆ ನೀರು ಸಾಲುತ್ತದೆ ಹೇಳಿ ? ಇದರ ಮೇಲೆ ಎರಡೂ ಕಡೆಯ ಜನರ ಸ್ವಾರ್ಥ. ಕರ್ನಾಟಕದವರು 'ನಮಗೇ ನೀರು ಸಾಲುವುದಿಲ್ಲ, ನಿಮಗೆ ಎಲ್ಲಿಂದ ಕೊಡುವುದು ನೀರು' ಎಂದು, ಇನ್ನು ತಮಿಳುನಾಡಿನವರು, ಕರ್ನಾಟಕದಲ್ಲಿ ಮಳೆ ಆಗುತ್ತದೋ ಬಿಡುತ್ತದೋ, ನೀರು ಇದೆಯೋ ಇಲ್ಲವೋ, 'ನಮಗೆ ನೀರು ಬಿಡಿ'. ಇದು ಸ್ವಾರ್ಥವಲ್ಲದೆ ಮತ್ತೇನು ?

ಕಾವೇರಿ ನಮಗೆ ಸೇರಿದ್ದೆಂದು ಎರಡೂ ರಾಜ್ಯದವರು ಕಚ್ಚಾಡಿದರೆ ಅದಕ್ಕೆ ಪರಿಹಾರವೆಲ್ಲಿ ಸಿಕ್ಕೀತು ? ಕಾವೇರಿ ಪ್ರಕೃತಿಗೆ ಸೇರಿದ್ದು. ಅದನ್ನು ಇಬ್ಬರೂ ಹಂಚಿಕೊಳ್ಳಬೇಕಲ್ಲವೇ ? ಜತೆಗೆ, ಎರಡೂ ರಾಜ್ಯದವರೂ ಕಡಿಮೆ ನೀರು ಬೇಕಾಗುವ ಬೆಳೆಗಳನ್ನು ಬೆಳೆದರೆ ಕಾವೇರಿಯಲ್ಲಿರುವಷ್ಟು ನೀರು ಸಾಲುತ್ತದೆ. ಹನಿ ನೀರಾವರಿಯನ್ನು ಅನುಸರಿಸಿದರೆ ನೀರಿನ ಬಳಕೆಯೂ ಕಡಿಮೆಯಾಗುತ್ತದೆ.

ಭಾರತದ ಅಂತರ-ರಾಜ್ಯ ಜಗಳಗಳಲ್ಲಿ ರಾಜ್ಯ-ಕೇಂದ್ರ ಸರ್ಕಾರಗಳು ಕೇವಲ ತಮ್ಮ ತಮ್ಮ ರಾಜಕೀಯ ಲಾಭದ ಬಗ್ಗೆ ಯೋಚಿಸುವುದೇ ಹೆಚ್ಚು. ಸಮಸ್ಯೆಗಳು ತಣ್ಣಗಾಗುತ್ತವೆಯೇ ಹೊರತು, ಪರಿಹಾರ ಮಾತ್ರ ಕಂಡುಕೊಳ್ಳಲು ಸಾಧ್ಯವೇ ಅಗಿಲ್ಲ. ಭಾರತದ ರಾಜ್ಯಗಳು, ಯುರೋಪಿನ ದೇಶಗಳ ಮಧ್ಯೆ ಹಲವು ಸಮಾನತೆಗಳಿವೆ. ಯುರೋಪಿನಲ್ಲಿ ಕೂಡ ಹಲವು ನದಿಗಳು ಹಲವು ದೇಶಗಳ ಮೂಲಕ ಹರಿಯುತ್ತವೆ. ಆದರೆ ನೀರಿಗಾಗಿ ಜಗಳವಾಡಿರುವುದನ್ನು ನಾನು ಕೇಳಿಯೇ ಇಲ್ಲ. ಹಲವು ಯೋಜನೆಗಳನ್ನು ಸುತ್ತಮುತ್ತಲಿನ ದೇಶಗಳು ಸೇರಿ ಕೈಗೊಂಡಿವೆ. 'ರೈನ್' ಮತ್ತು 'ಡಾನ್ಯೂಬ್' ನದಿಗಳ ಮಧ್ಯೆ ಕಾಲುವೆಯನ್ನು ಸೃಷ್ಟಿಸಿ 'ನಾರ್ತ್' ಸಮುದ್ರದಿಂದ 'ಬ್ಲಾಕ್' ಸಮುದ್ರದವರೆಗೂ ಹಾಯ್ದುಹೋಗಬಹುದಾದಂತಹ ಮಾರ್ಗವನ್ನು ನಿರ್ಮಿಸಿವೆ. ಇವೆಲ್ಲಾ ಯೋಜನೆಗಳು ಪರಸ್ಪರ ಸಹಕಾರವಿಲ್ಲದಿದ್ದರೆ ಹೇಗೆ ಸಾಧ್ಯವಾಗುತ್ತಿತ್ತು ? ನಮ್ಮ ಸರ್ಕಾರಗಳು ಸ್ವಲ್ಪ ರಾಜಕೀಯವನ್ನು ಬದಿಗಿಟ್ಟು, ಪರಸ್ಪರ ಸಹಕಾರವನ್ನು ತೋರಿದ್ದರೆ ಇಂದಿನ ಈ ಆತಂಕ ಎಲ್ಲಿರುತ್ತಿತ್ತು ?

ಭೂಮಿಯ ಈ ದಿನಗಳಲ್ಲಿ ಬರ, ಪ್ರವಾಹ, ಚಂಡಮಾರುತಗಳು ಹೆಚ್ಚಾಗಿವೆ. ಎಲ್ಲೋ ಓದಿದ ನೆನಪು, "ಭಾರತದಲ್ಲಿ ಇನ್ನು ಮುಂದೆ ಮುಂಗಾರು ಮಳೆ ಸಾಮಾನ್ಯವಾಗಿರುವುದಿಲ್ಲ". ಕಳೆದ ವರ್ಷದಲ್ಲೇ, ಗುಜರಾತ್ ನಲ್ಲಿ ಅತಿವೃಷ್ಟಿಯಾದರೆ, ಅತಿ ಹೆಚ್ಚು ಮಳೆ ಬೀಳುವ ಅಸ್ಸಾಂನಲ್ಲಿ ಬರ. ಪರಿಸ್ಥಿತಿ ಹೀಗಿರುವಾಗ ನಾವು ಮಳೆಯನ್ನು ನಂಬಿ ಬದುಕಿರಲು ಸಾಧ್ಯವೇ ? ಅದರಲ್ಲೂ ಮುಂಗಾರು ಮಳೆಯಿಂದಲೇ ಮೈದುಂಬಿ ಹರಿಯುವ ದಕ್ಷಿಣ ಭಾರತದ ನದಿಗಳನ್ನೇ ನಂಬಿರಲು ಸಾಧ್ಯವೇ ? ಪ್ರಪಂಚದಲ್ಲಿ ಈಗಾಗಲೇ ಆಫ್ರಿಕಾ, ಆಸ್ಟ್ರೇಲಿಯಾ ಖಂಡಗಳು ದಶಕಗಳ ಹಿಂದೆ ಕಂಡಂತಹ ಬರದಿಂದ ಮತ್ತೆ ತತ್ತರಿಸುತ್ತಿವೆ. ಕುಡಿಯುವ ನೀರಿಗೆ ಹಾಹಾಕಾರವೆದ್ದಿದೆ. ಆಸ್ಟ್ರೇಲಿಯಾದಲ್ಲಿ ಬಳಸಿದ ನೀರನ್ನು ಮತ್ತೆ ಪರಿಷ್ಕರಿಸಿ ಬಳಸಲಾಗುತ್ತಿದೆ. ಜಕಾರ್ತ ಪ್ರವಾಹದಿಂದ ನರಳುತ್ತಿದೆ. ನಮ್ಮ ರಾಜ್ಯವೂ ಎರಡು ವರ್ಷಗಳ ಹಿಂದೆ ಬರದಿಂದ ನರಳಿತ್ತು. ಕೇವಲ ರೈತರ ಆತ್ಮಹತ್ಯೆ ಸುದ್ದಿಯಾಯಿತೇ ಹೊರತು, ಮುಂದಿನ ಬರದ ದಿನಗಳನ್ನು ಹೇಗೆ ಎದುರಿಸುವುದು ಎಂದು ಯಾರೂ ಯೋಚಿಸಲಿಲ್ಲ. ಕೊಳವೆ ಭಾವಿಗಳನ್ನು ಸಿಕ್ಕಲ್ಲೆಲ್ಲಾ ತೋಡಿ ನೀರನ್ನು ಹೀರುತ್ತಿದ್ದೇವೆ ಅಷ್ಟೆ. ಅಂತರ್ಜಲಕ್ಕೆ ಮತ್ತೆ ನೀರುಣಿಸುವ ಬಗ್ಗೆ ಯೋಚಿಸಿಯೇ ಇಲ್ಲ.

ಹೀಗೇ ಮುಂದೆ ನಡೆದರೆ, ನಮಗೆಲ್ಲಾ ಒಂದು ದೊಡ್ದ ಆಘಾತ ಕಾದಿದೆ. ನಮ್ಮ ಜನರಿಗೆ ಕುಡಿಯುವುದಕ್ಕೂ ನೀರಿರುವುದಿಲ್ಲ.

ಭಾರತೀಯರು ಕೇವಲ ಪೂಜೆ-ಪುನಸ್ಕಾರಗಳಲ್ಲಿ ನೀರು ಅತ್ಯಮೂಲ್ಯವಾದದ್ದು ಎಂದು ಹಾಡಿ ಹೊಗಳುತ್ತಾರೆ ಅಷ್ಟೆ. ನಿತ್ಯ ಜೀವನದಲ್ಲಿ ನೀರಿನ ಬಳಕೆಯ ಬಗ್ಗೆ ಅತ್ಯಲ್ಪ ಕಾಳಜಿಯನ್ನೂ ತೋರುವುದಿಲ್ಲ. ನೀರಿನ ಮಹತ್ವ, ಅದು ಇಲ್ಲದಿರುವಾಗಲೇ ಅರಿವಾಗಬೇಕೆ ?

ಮುಂದೆ ಏನೋ, ಹೇಗೋ ಎಂಬ ಆತಂಕ.

0 Comments:

Post a Comment

Subscribe to Post Comments [Atom]

<< Home