Monday, February 12, 2007

ಮತ್ತದೇ ...

ಇವತ್ತು ಅದೇಕೋ "ಮತ್ತದೇ ಬೇಸರ, ಅದೆ ಸಂಜೆ, ಅದೇ ಏಕಾಂತ" ಭಾವಗೀತೆ ಮನಸ್ಸಿನಲ್ಲಿ ಗುನುಗುತ್ತಿದೆ. ಏನು ಕಾರಣ ಎಂದು ತಿಳಿಯುತ್ತಿಲ್ಲ. ಇಂದು ಕರ್ನಾಟಕದಲ್ಲಿ ಮತ್ತೊಮ್ಮೆ ಬಂದ್. ಎಲ್ಲವೂ ಮತ್ತೊಮ್ಮೆ ನಿಶ್ಯಬ್ದ. ಹೊರಗೆ ಬೀದಿಯಲ್ಲಿ ಜನರಿಲ್ಲ, ಜೋರಾಗಿ ಸದ್ದು ಮಾಡುವ ವಾಹನಗಳಿಲ್ಲ. ದಿನವೂ ತನ್ನಲ್ಲಿ ಜಾಗವಿಲ್ಲದಿದ್ದರೂ ಜನರನ್ನು ತುಂಬಿಕೊಂಡು ಹೋಗುವ ಬಸ್ಸುಗಳ ಅಬ್ಬರವಿಲ್ಲ. ಕೇವಲ ಆಕಾಶದಲ್ಲಿ ಹಾರಾಡುತಿರುವ ವಿಮಾನದ ಸದ್ದು ಮೇಲಿಂದ ಮೇಲೆ ಕೇಳುತ್ತಿದೆ. ಪಕ್ಕದ ಬೀದಿಯಲ್ಲಿ ಮಕ್ಕಳು ಸಂತೋಷದಿಂದ ಕ್ರಿಕೆಟ್ ಆಡುತ್ತಿದ್ದಾರೆ. ಅದೇಕೋ ಇಂದು ಮನಸ್ಸಿನಲ್ಲಿ ಬೇಸರ.

ಕಳೆದ ಒಂದು ವರ್ಷದಲ್ಲಿ ಮೂರನೆಯ ಬಾರಿ ಕರ್ನಾಟಕ ಬಂದ್. ನಾನು ಕೇರಳ, ಬಂಗಾಳವೆಂದರೆ ಬಂದ್ ಎಂದು ಅಣಗಿಸಿಸುತ್ತಿದ್ದೆ. ಈಗಿನ ಪರಿಸ್ಥಿತಿ ನೋಡಿದರೆ ಕರ್ನಾಟಕವೂ ಅವರಿಗೆ ಕಮ್ಮಿಯಿಲ್ಲ ಎಂದೆನಿಸುತ್ತಿದೆ. ಆದರೂ ಕೇರಳ, ಬಂಗಾಳವನ್ನು ಬಂದ್ ವಿಷಯದಲ್ಲಿ ಸೋಲಿಸಲು ಸಾಧ್ಯವಿಲ್ಲ ಬಿಡಿ.

ಕಾವೇರಿ ವಿಷಯದಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂದು ನ್ಯಾಯಾಲಯದ ತೀರ್ಪನ್ನು ವಿರೋಧಿಸಿ ಇಂದು ಬಂದ್. ಕಾವೇರಿ ನ್ಯಾಯ ಮಂಡಳಿಯ ತೀರ್ಪು ತಮಿಳುನಾಡಿಗೆ ಹೆಚ್ಚಿನ ಪಾಲನ್ನು ನೀಡಿದೆ. ಕರ್ನಾಟಕಕ್ಕೆ ಕಿರಿಯ ಪಾಲು ಸಿಕ್ಕಿರುವುದು ನಮ್ಮಿಂದ ಸಹಿಸಲಾಗುತ್ತಿಲ್ಲ. ಸಾವಿರ ಪುಟಗಳ ತೀರ್ಪುನ್ನು ಓದಿದರಷ್ಟೆ ನಿಜವಾದ ಅಂಕಿ-ಅಂಶಗಳು ತಿಳಿಯುತ್ತವೆ. ಪ್ರಜಾವಾಣಿ ಪತ್ರಿಕೆಯಲ್ಲಿ ತೀರ್ಪನ್ನು ಎಳೆ-ಎಳೆಯಾಗಿ ಬಿಡಿಸಿ ಅದನ್ನು ಪ್ರಕಟಿಸುತ್ತಿದ್ದಾರೆ. ತೀರ್ಪಿನಲ್ಲಿ ಕರ್ನಾಟಕಕ್ಕೆ ಹೆಚ್ಚಿನ ಬಾಧಕಗಳೇ ಇವೆ ಎಂದು ಹೇಳಿದ್ದಾರೆ.

ತೀರ್ಪು ಬಂದಾಕ್ಷಣ ಹೆಚ್ಚಿನ ಕನ್ನಡಿಗರೆಲ್ಲಾ ಕರುಣಾನಿಧಿ ಸಮೇತ ಕೇಂದ್ರದಲ್ಲಿರುವ ತಮಿಳನಾಡಿನ ಮಂತ್ರಿಗಳ ಕೈವಾಡವೆಂದು ತಮ್ಮ ಕೋಪ, ಸಂಕಟವನ್ನು ತೋರಿದರು. ಆದರೆ ಇದೆಷ್ಟು ಸರಿ ? ಈ ತೀರ್ಪನ್ನು ನೋಡಿದರೆ ಕರ್ನಾಟಕದ ರಾಜಕಾರಣಿಗಳು ಕಾವೇರಿಯನ್ನು serious ಆಗಿ ತೆಗೆದುಕೊಂಡಿದ್ದಾರೆಯೇ ಎಂಬುದೇ ಪ್ರಶ್ನೆಯಾಗಿ ಕಾಡುತ್ತಿದೆ. ೧೭ ವರ್ಷ ನಡೆದ ನ್ಯಾಯಮಂಡಳಿಯ ಕಲಾಪವನ್ನು ನಮ್ಮ ಸರ್ಕಾರ ಕೂಲಂಕುಶವಾಗಿ follow ಮಾಡಿತ್ತೋ ಇಲ್ಲವೋ ಎಂಬುದೇ ಸಂಶಯಾಸ್ಪದವಾಗಿದೆ. ತೀರ್ಪಿನಲ್ಲಿ ತಮಿಳುನಾಡಿನ ರಾಜಕಾರಣಿಗಳ ಕೈವಾಡವಿದೆಯೋ ಇಲ್ಲವೊ ಗೊತ್ತಿಲ್ಲ. ಆದರೆ ಒಂದೊಂತೂ ಖಂಡಿತವಾಗಿಯೂ ಸತ್ಯ, ತಮಿಳುನಾಡಿನ ರಾಜಕಾರಣಿಗಳು ನಮ್ಮವರಿಗಿಂತ ತಮ್ಮ ರಾಜ್ಯ, ತಮ್ಮ ಭಾಷೆ, ತಮ್ಮವರಿಗೆ ಬದ್ದರಾಗಿದ್ದಾರೆ. ತಮಿಳುನಾಡಿಗೋಸ್ಕರ ಅವರು ಏನು ಮಾಡಲೂ ಸಿದ್ದರಾಗಿದ್ದಾರೆ ಎಂಬುದೊಂತೂ ಹಿಂದಿನಿಂದಲೂ ಹಲವಾರು ಬಾರಿ ಸಾಬೀತಾಗಿದೆ. ಅವರಿಗೆಲ್ಲರಿಗೂ ನನ್ನ ಅಭಿನಂದನೆಗಳು. ನಮ್ಮವರು ಬಿಡಿ, ಹೇಳಿಕೆಗಳನ್ನು, ಆಶ್ವಾಸನೆಗಳನ್ನು ನೀಡುವುದರಲ್ಲಿ ಎತ್ತಿದ ಕೈ !!

ಬಿಡಿ! ಎಲ್ಲವೂ ನಮ್ಮ ಹಣೆಬರಹವೆಂದೆನಿಸುತ್ತದೆ. ಸರಿ, ಇಂದಿನ ಬಂದ್ ಯಾರ ವಿರುದ್ಧ ? ಬೆಳಗಾವಿ ವಿಷಯದಲ್ಲಿ ಕೇಂದ್ರ ಸರ್ಕಾರದ ಕೈವಾಡವಿತ್ತು. ಕಳೆದ ಬಾರಿ ಬಂದ್ ಕೂಡ ಕೇಂದ್ರ ಸರ್ಕಾರದ ವಿರುದ್ಧವಾಗಿತ್ತು. ಅದರಲ್ಲಿ ರಾಜಕೀಯವೂ ಇತ್ತು. ಆದರೆ ಕಾವೇರಿ ವಿಷಯದಲ್ಲಿ ತೀರ್ಪನ್ನು ನೀಡಿರುವುದು ನ್ಯಾಯಾಲಯ. ಬಂದ್ ನ್ಯಾಯಾಲಯದ ವಿರುದ್ಧವೇ ? ನ್ಯಾಯಾಲಯ ಕಾವೇರಿ ನದಿ ಪಾತ್ರದ ಎಲ್ಲಾ ರಾಜ್ಯಗಳು ನೀಡಿರುವ ಅಂಕಿ-ಅಂಶಗಳನ್ನು ವಿಶ್ಲೇಷಿಸಿ ತೀರ್ಪುನ್ನು ನೀಡಿದೆ. ಹಾಗಾದರೆ ಈ ಬಂದ್ ನಮ್ಮ ಸರ್ಕಾರದ ವಿರುದ್ಧವೇ ? ಗೊತ್ತಿಲ್ಲ... ಸರ್ಕಾರ ಈಗಾಗಲೇ ತೀರ್ಪಿನ ಮರು ಪರಿಶೀಲನೆಗೆ ನ್ಯಾಯ ಮಂಡಳಿಯ ಎದುರು ಅರ್ಜಿ ಸಲ್ಲಿಸಲು ನಿರ್ಧರಿಸಿದೆ. ಇಂದಿನ ಬಂದ್‍ನಿಂದ ಎಲ್ಲರಿಗೂ ಒಂದು ದಿನದ ರಜೆಯೇ ಹೊರತು ಬೇರೆ ಯಾವ ಉದ್ದೇಶವೂ ನನಗೆ ಕಾಣುತಿಲ್ಲ.

ನ್ಯಾಯ ಮಂಡಳಿಯ ಕಡೆಯ ತೀರ್ಪಿನಲ್ಲೂ ಕರ್ನಾಟಕಕ್ಕೆ ನಮಗೆ ಅಗತ್ಯವಿರುವಷ್ಟು ಕಾವೇರಿಯ ನೀರು ಸಿಗುವುದು ಕನಸೇ ! ನಾವು ಕಾವೇರಿಯ ಮೇಲೆ ಅಗತ್ಯಕ್ಕಿಂತ ಹೆಚ್ಚು ಅವಲಂಬಿಸಿದ್ದೇವೆ. ನಮ್ಮ ನೀರಿನ ಬೇಡಿಕೆಗಳನ್ನು ಕಾವೇರಿಯಿಂದ ಪೂರೈಸಲು ಅಸಾಧ್ಯ. ನಮ್ಮ ನೀರಿನ ದಾಹವನ್ನು ಪೂರೈಸಿಕೊಳ್ಳಲು ಇರುವುದು ಎರಡೇ ಮಾರ್ಗಗಳು. ಒಂದು, ನೀರನ್ನು ಪೋಲು ಮಾಡದಿರುವುದು. ಎರಡು, ಮಳೆಗಾಲದಲ್ಲಿ ಅಣೆಕಟ್ಟಿನಲ್ಲಿರುವ ನೀರನ್ನು ಎಲ್ಲಾ ಕೆರೆ-ಕಟ್ಟೆಗಳಿಗೆ ಹರಿಸಿ ಭರ್ತಿ ಮಾಡಿಕೊಳ್ಳುವುದು. ನಾವು ನಮ್ಮ ಅಣೆಕಟ್ಟುಗಳಿಂದ ಮಳೆಗಾಲದಲ್ಲಿ ಹೆಚ್ಚಾಗಿರುವ ನೀರನ್ನು ನದಿಗೆ ಬಿಟ್ಟು ಬಿಡುತ್ತೇವೆ. ಅದರ ಬದಲು ಹೆಚ್ಚು ಹೆಚ್ಚು ಕೆರೆ-ಕಟ್ಟೆಗಳನ್ನು ಕಟ್ಟಿ ಅವುಗಳಿಗೆ ತುಂಬಿಸಿಟ್ಟುಕೊಂಡರೆ ಬೇಸಿಗೆಯಲ್ಲಿ ನೀರಿನ ತಾಪತ್ರಯವನ್ನು ಕಡಿಮೆಯಾಗಿಸಬಹುದು. ಕಳೆದ ಬಾರಿ ಕೃಷ್ಣಾನದಿಯಲ್ಲಿ ಪ್ರವಾಹ ಬಂದಾಗಲೂ ಬಿಜಾಪುರ, ಗುಲಬರ್ಗಾಗಳಲ್ಲಿ ನೀರಿಗಾಗಿ ಪರದಾಡುವುದು ತಪ್ಪಲಿಲ್ಲ. ನ್ಯಾಯಾಲಯ ನೀಡುವ ತೀರ್ಪಿಗಿಂತ ಒಂದಿಷ್ಟನ್ನೂ ಹೆಚ್ಚಾಗಿ ಬಿಡದೆ ಶೇಖರಿಸಿಟ್ಟುಕೊಂಡರೆ ನಮ್ಮ ನೀರಿನ ದಾಹವನ್ನು ಸ್ವಲ್ಪವಾದರೂ ನೀಗಿಸಬಹುದು.

ಕಾವೇರಿ ವಿಷಯದಲ್ಲಿ ಸರ್ಕಾರ ಈಗಲಾದರೂ ಎಚ್ಚೆತ್ತು ಸರಿಯಾದ ಸಾಕ್ಷಿ, ಪುರಾವೆ, ಅಂಕಿ-ಅಂಶಗಳನ್ನು ಕೊಟ್ಟು ಕರ್ನಾಟಕಕ್ಕೆ ನ್ಯಾಯವನ್ನು ತಂದು ಕೊಡಲಿ.

ನಮ್ಮ ಸುತ್ತಮುತ್ತಲಿನ ಎಲ್ಲಾ ರಾಜ್ಯಗಳ ಜತೆ ಯಾವುದೇ ವಿಷಯಕ್ಕೂ ಜಗಳವಾಡದೇ ಮತ್ತಿದೇ ಬೇಸರ, ಇದೇ ಏಕಾಂತ ನಮ್ಮ ನಾಡನ್ನು ಎಂದೂ ಕಾಡದಿರಲಿ........

0 Comments:

Post a Comment

Subscribe to Post Comments [Atom]

<< Home