Thursday, June 21, 2007

ಟಪ್.. ಟಪ್.. ಟಪ್

ಟಪ್.. ಟಪ್.. ಟಪ್... ಎಂದು ಹೊರಗೆ ಮಳೆ ನೀರಿನ ಹನಿಗಳು ಸದ್ದು ಮಾಡುತ್ತಿವೆ.

ಮಳೆಗಾಲ ಬಂದಾಗಿದೆ. ಮಳೆಯ ಕಪ್ಪು ಮೋಡಗಳು ಆಕಾಶದಲ್ಲಿ ಸಾಗುತಿವೆ. ಮಳೆಗಾಲವೆಂದರೆ ಅದೇನೋ ವಿಶೇಷ.

ಎಲ್ಲೆಲ್ಲೂ ಹಚ್ಚ ಹಸಿರು. ತಣ್ಣನೆಯ ಗಾಳಿ. ಎಲ್ಲೆಲ್ಲೂ ಒದ್ದೆ. ಭತ್ತದ ಗದ್ದೆಯಲ್ಲಿ ಹೊಸ ಸಸಿಗಳು. ಮೈದುಂಬಿ ಹರಿಯುವ ನದಿಗಳು. ಭೋರ್ಗರೆಯುವ ಜಲಪಾತಗಳು. ರಸ್ತೆಯಲ್ಲಿ ಬಣ್ಣ ಬಣ್ಣದ ಕೊಡೆಗಳು. ಮಕ್ಕಳ ಹೊಸದಾದ ರೈನ್-ಕೋಟ್‍ಗಳು. ಎಲ್ಲೆಡೆಯೂ ಶುಭ್ರ-ಸ್ವಚ್ಛ.

ಊಟದ ಜತೆಗೆ ಎಣ್ಣೆಯಲ್ಲಿ ಕರೆದ ಬೇಸಿಗೆಯಲ್ಲಿ ಒಣಗಿಸಿಟ್ಟ ಹಪ್ಪಳ, ಸಂಡಿಗೆ, ಬೇಸಿಗೆಯಲ್ಲಿ ಹಾಕಿದ ಮಾವಿನ ಮಿಡಿ ಉಪ್ಪಿನಕಾಯಿ. ಮಳೆಯನ್ನು ನೋಡುತ್ತ ಬಿಸಿ-ಬಿಸಿಯಾದ ಕಾಫಿಯನ್ನು ಹೀರುವುದೇ ಆನಂದ. ಶಾಲೆಯಿಂದ ಮನೆಗೆ ಹಿಂದಿರುಗುವಾಗ ಬೀದಿಯಲ್ಲಿ ನಿಂತ ಪ್ರತಿಯೊಂದು ನೀರಿನ ಹೊಂಡದಲ್ಲಿ ಕಾಲಾಡಿಸಿ ಬರುವುದೇ ಒಂದು ವಿಶಿಷ್ಟ ಅನುಭವ. ಇನ್ನು ಮಳೆಯಲ್ಲಿ ಕಾಲೇಜಿಗೆ ಒಂದು ಕೈಯಲ್ಲಿ ಕೊಡೆ ಹಿಡಿದು ಸೈಕಲ್ ತುಳಿಯುವುದೇ ಒಂದು ಸಾಹಸವೇ ಸರಿ. ಕೆಸರು, ಕೊಚ್ಚೆ, 'ಪಾಯಸ'ಗಳ ಮೂಲಕ 'ಲಾಂಗ್ ಜಂಪ್' ಮಾಡಿಕೊಂಡು ನಡೆದಾಡುವುದೂ ಅದಕ್ಕಿಂತ ಕಡಿಮೆ ಸಾಹಸವಲ್ಲ. ಜತೆಗೆ ಪೂರ್ತಿಯಾಗಿ ಒಣಗದ ಒಗೆದ ಬಟ್ಟೆಗಳು. ಹೊರಗೆ ನಿಲ್ಲದ ಮಳೆ.

ಸರೀ... ಮಳೆಗಾಲದಲ್ಲಿ ಬೀಳುವ ಅಷ್ಟೊಂದು ನೀರು ಎಲ್ಲಿಗೆ ಹೋಗುತ್ತದೆ? ಹಳ್ಳಿಗಳಲ್ಲಾದರೆ ಸಣ್ಣ ಪುಟ್ಟ ಹೊಂಡ, ಕೆರೆ-ಕಟ್ಟೆ ಬಾವಿಗಳಿಗೆ ಸೇರುತ್ತವೆ. ಆದರೆ ನಗರ ಪ್ರದೇಶದಲ್ಲಿ ಎಲ್ಲಾ ನೀರು ಚರಂಡಿಗೆ ಸೇರಿ ಕಲುಷಿತಗೊಳ್ಳುತ್ತವೆ. ಮಣ್ಣಿದ್ದರೆ ಅಲ್ಪ ಸ್ವಲ್ಪ ನೀರನ್ನು ಮಣ್ಣೇ ಹೀರಿಕೊಳ್ಳುತ್ತದೆ. ಇದ್ದ ಕೆರೆ-ಕಟ್ಟೆಗಳನ್ನೆಲ್ಲಾ ಒಡೆದು ಹೊಸ-ಹೊಸ ಬಡಾವಣೆಗಳನ್ನಾಗಿ ಮಾಡಿಯಾಗಿದೆ. ಮೇಲೆ ಮೇಲೆ ಕಟ್ಟಿರುವ ಮನೆಗಳಿಗೆ ನೀರು ಪೂರೈಸಲು ಕೊಳವೆ ಬಾವಿಗಳನ್ನು ತೋಡುತ್ತಿದ್ದೇವೆ. ಏರುತ್ತಿರುವ ಕೊಳವೆ ಬಾವಿಗಳ ಸಂಖೆಯನ್ನು ನೋಡಿದರೆ, ಜನ ಬಾವಿಯಲ್ಲಿ ನೀರು ಸದಾಕಾಲ ದೊರೆಯುವುದೆಂದು ನಂಬಿರುವ ಹಾಗಿದೆ. ಈ ಕೊಳವೆ ಬಾವಿಗಳಲ್ಲಿ ಎಷ್ಟು ದಿನ ನೀರು ಇದ್ದೀತು?

ನಮ್ಮಲ್ಲಿ ಈಗಿರುವ ಎಲ್ಲಾ ಕೆರೆಗಳೂ ಹಿಂದಿನ ಅರಸರು, ಪಾಳೇಗಾರರು ಕಟ್ಟಿಸಿರುವುದಷ್ಟೆ. ಸ್ವಾತಂತ್ರ್ಯ ಬಂದ ಮೇಲೆ ಸರ್ಕಾರ ನದಿಗಳಿಗೆ ಅಡ್ಡಲಾಗಿ ಕಟ್ಟೆಗಳನ್ನು ಕಟ್ಟಿಸಿತೇ ಹೊರತು ಕೆರೆಗಳನ್ನು ಕಟ್ಟಲಿಲ್ಲ. ಎಲ್ಲಕ್ಕೂ ನದಿ ನೀರನ್ನೇ ಆಸರೆಯಾಗಿ ಮಾರ್ಪಟ್ಟಿದೆ. ಮನೆಗೆ, ಹೊಲಕ್ಕೆ, ಗದ್ದೆಗೆ, ತೋಟಕ್ಕೆ, ಕಾರ್ಖಾನೆಗೆ ಎಲ್ಲದಕ್ಕೂ ನದಿ ನೀರೇ ಗತಿ. ಆದರೆ ಇವೆಲ್ಲವನ್ನೂ ಪೂರೈಸುವುದಕ್ಕೆ ನದಿಯಲ್ಲಿ ಅಷ್ಟೊಂದು ನೀರಿದೆಯೇ? ಕೆರೆ ಕಟ್ಟೆಗಳಲ್ಲಿ ಹೂಳು ತುಂಬಿಕೊಂಡು ಬೇಸಿಗೆಯಲ್ಲಿ ನೀರೇ ನಿಲ್ಲದೆ ಬತ್ತಿ ಹೋಗುತ್ತಿವೆ.

ಈಗ ಕಾಲ ಮೀರಿದೆ. ದೊಡ್ಡ ದೊಡ್ಡ ಕೆರೆಗಳನ್ನು ಕಟ್ಟಿಸುವಷ್ಟು ಜಾಗ ಸರ್ಕಾರದ ಬಳಿ ಇಲ್ಲವೂ ಇಲ್ಲ. ಜನರೇ ಎಚ್ಚಿತ್ತು ಕೊಳ್ಳಬೇಕಷ್ಟೆ. ನೀರಿನ ಮೌಲ್ಯದ ಬಗ್ಗೆ ನಮ್ಮ ಜ್ಞಾನ ಅಷ್ಟಕಷ್ಟೆ. ನೀರನ್ನು ಪೋಲು ಮಾಡುವುದರಲ್ಲಿ ಎತ್ತಿದ ಕೈ. ಕುಡಿಯುವ ನೀರನ್ನು ಕಾರು ತೊಳೆಯುವುದಕ್ಕೆ ಬಳಸುತ್ತೇವೆ. ನೀರಿನ ಪುನರ್ಬಳಕೆಯ ಕಡೆ ನಾವಿನ್ನೂ ಒಂದು ಹೆಜ್ಜೆಯೂ ಮುಂದೆ ಇರಿಸಿಲ್ಲ.

ಈಗಾಗಲೇ ಸರಿಯಾದ ಪ್ರಮಾಣದ ಮಳೆ ಬರದಿದ್ದರೆ ಹಾಹಾಕಾರವೇಳುವ ಸ್ಥಿತಿ ನಮ್ಮಲ್ಲಿದೆ. ಜತೆಗೆ ನದಿನೀರಿನ ವಿವಾದಗಳು. ನದಿಯಲ್ಲಿನ ನೀರು ಏರುತ್ತಿರುವ ಜನಸಂಖ್ಯೆಯ ಹಾಗೆ ಏರುವುದಿಲ್ಲವಲ್ಲಾ! ನಮ್ಮ ನೀರಿನ ಬಳಕೆಯನ್ನು ಪೂರೈಸಲು ಉಳಿಯುವುದು ಎರಡೇ ದಾರಿ. ಒಂದು ಸಮುದ್ರದ ನೀರನ್ನು ಉಪ್ಪು ತೆಗೆದು ಬಳಸುವುದು. ಆದರೆ ಅದಕ್ಕೆ ಬೇಕಾಗುವ ವಿದ್ಯುತ್ತನ್ನು ಎಲ್ಲಿಂದ ತರುವುದು? ಉಳಿದ ಇನ್ನೊಂದು ದಾರಿ ಬೀಳುವ ಮಳೆಯ ಪ್ರತಿಯೊಂದು ಹನಿಯನ್ನು ಶೇಖರಿಸಿಟ್ಟುಕೊಳ್ಳುವುದು. ಈಗೀಗ ಸರ್ಕಾರ ಹಾಗೂ ಜನರೂ ಕೂಡ ಇದರ ಬಗ್ಗೆ ಸ್ವಲ್ಪ ಮಟ್ಟಿಗೆ ಒಲವನ್ನು ತೋರಿದ್ದಾರೆ. ಇದನ್ನು ಪ್ರತಿಯೊಬ್ಬರೂ ಪಾಲಿಸಿದರೆ ನೀರಿಗಾಗಿ ಎದ್ದಿರುವ ಹಾಹಾಕಾರ ಸ್ವಲ್ಪ ಮಟ್ಟಿಗಾದರೂ ಕಡಿಮೆಯಾದೀತು. ಭೂಮಿಯ ಅಂತರ್ಜಲವನ್ನು ಪುನಃಶ್ಚೇತನಗೊಳಿಸಬಹುದು. ಆಫ್ರಿಕಾ, ಆಸ್ಟ್ರೇಲಿಯಾ ಕಳೆದ ಕೆಲವು ವರ್ಷಗಳಿಂದ ಎದುರಿರುತ್ತಿರುವ ಬರವನ್ನು ನೋಡಿದರೆ ಮೈ ಜುಮ್ಮೆನ್ನುತ್ತದೆ. ಆ ದೇಶಗಳು ಜನಸಂಖ್ಯೆ ಕಡಿಮೆ ಇದ್ದುದರಿಂದ ಹೇಗೋ ನಿಭಾಯಿಸುತ್ತಿವೆ. ನಮ್ಮ ದೇಶದಲ್ಲೂ ಅಂತಹದ್ದೇ ಬರ ಬಂದರೆ ದೇವರೇ ಗತಿ !

ಛೆ! ದೊಡ್ಡವರಾಗುತ್ತಾ, ದೇಶದ, ಜಗತ್ತಿನ ನೈಜ ಪರಿಸ್ಥಿತಿಗಳು ನಮಗೆ ತೆರೆದುಕೊಳ್ಳುತ್ತವೆ. ಚಿಕ್ಕವರಾಗಿದ್ದಾಗ ಅನುಭವಿಸುವ ಆ ಸುಖ, ಶಾಂತಿ, ನೆಮ್ಮದಿ ಕಳೆದು ಹೋಗುತ್ತವೆ. ನೋಡಿ, ಚಿಕ್ಕ ವಯಸ್ಸಿನ ಮಳೆಗಾಲದ ಆ ನೆನಪುಗಳು ಇಂದಿನ ಕರಾಳ ಸತ್ಯದಲ್ಲಿ ಮರೆಯಾದವು.

0 Comments:

Post a Comment

Subscribe to Post Comments [Atom]

<< Home