Tuesday, May 08, 2007

ನೆನೆದವರ ಮನದಲ್ಲಿ ...


ಮುಂಗಾರು ಈಗ ಪ್ರಾರಂಭವಾಗಿದೆ. ಆದರೆ ಕಳೆದ ಕೆಲವು ತಿಂಗಳಿಂದ ಸುರಿಯುತ್ತಿರುವ ಇನ್ನೊಂದು 'ಮುಂಗಾರು ಮಳೆ', ಕಳೆದ ಕೆಲವು ವರ್ಷಗಳಿಂದ ಆವರಿಸಿದ್ದ ಹಿಟ್ ಚಿತ್ರಗಳ ಬರವನ್ನು ಅಲ್ಪ-ಸ್ವಲ್ಪ ದೂರವಾಗಿಸಿದೆ. ಹೊಸ ಹೊಸ ನಟ-ನಟಿಯರ ಚಿತ್ರಗಳು ಚಿಗುರೊಡೆಯುತ್ತಿವೆ. ಎಲ್ಲೆಲ್ಲೂ 'ಮುಂಗಾರು ಮಳೆ'ಯ ಅಬ್ಬರ. ಕನ್ನಡ ಚಿತ್ರರಂಗಕ್ಕೊಂದು ಪುನಶ್ಚೇತನವನ್ನು ನೀಡಿದೆ.

ಮಳೆಗಾಲದಲ್ಲಿ ಮಲೆನಾಡಿನಲ್ಲಿ ಸದಾ ಸುರಿಯುವ ಮಳೆಯಲ್ಲಿ ಚಿತ್ರೀಕರಿಸಿರುವ ಮುಂಗಾರು ಮಳೆ ನೋಡುಗರಿಗೆ ಮಲೆನಾಡಿನ ಹಸಿರಿನ ಸೌಂದರ್ಯವನ್ನು ಉಣಬಡಿಸಿದೆ. ಸಕಲೇಶಪುರದ ಘಟ್ಟಗಳನ್ನು ಜನರ ಕಣ್ಮುಂದಿರಿಸಿದೆ. ಯಾರೂ ಕಂಡಿರದ ಜೋಗದ ಸಿರಿಯನ್ನು ತೋರಿಸಿದೆ. ಕನ್ನಡ ಪದಗಳ ಸೊಗಡನ್ನು ತನ್ನ ಹಾಡುಗಳಲ್ಲಿ ಸೆರೆ ಹಿಡಿದಿದೆ. ಯಾರು ತಾನೆ ಸವಿಯಾರು ಈ ಹಿತಾನುಭವವನ್ನು ?

ಕಿರುತೆರೆಯಲ್ಲಿ ಸಾಕಷ್ಟು ಹೆಸರು ಮಾಡಿರುವ 'ಪಕ್ಕದ ಮನೆಯ' ಗಣೇಶ ಮುಂಗಾರು ಮಳೆಯಲ್ಲಿ ಪರಿಪಕ್ವ ಅಭಿನಯವನ್ನು ನೀಡಿದ್ದಾರೆ. ಚಿತ್ರದಲ್ಲಿ ಅವರ ಮಾತುಗಳು ಜನರ ಮನಸ್ಸಿನೊಂದಿಗೆ ಸ್ಪಂದಿಸುತ್ತವೆ. ಚಿತ್ರದ ನಾಯಕಿ ಸಂಜನ ಕೂಡ ತೃಪ್ತಿಕರ ಅಭಿನಯನ್ನು ನೀಡಿದ್ದಾರೆ. ಇನ್ನು ಅನಂತನಾಗ್, ಸುಧಾ ಬೆಳವಾಡಿ ಮತ್ತು ಪದ್ಮಜಾ ರಾವ್‍ರವರುಗಳ ಅಭಿನಯ ಚಿತ್ರಕ್ಕೆ ಮೆರಗು ನೀಡಿದೆ. ಒಂದು ಸಣ್ಣ ಎಳೆಯನ್ನು ಕಥೆಯಾಗಿಟ್ಟುಕೊಂಡು ಯೋಗರಾಜ್ ಭಟ್ ಅದ್ಭುತ ಚಿತ್ರಕಾವ್ಯವನ್ನು ರಚಿಸಿದ್ದಾರೆ. ತಮ್ಮ ಊರಿನ ಹುಡುಗನಿಗೋಸ್ಕರ ಚಿತ್ರವನ್ನು ನಿರ್ಮಿಸಿರುವ ಕೃಷ್ಣಪ್ಪನವರು ಇತರರಿಗೆ ಮಾದರಿಯಾಗಿದ್ದಾರೆ. ಮನೋ ಮೂರ್ತಿಯವರ ಸಂಗೀತ ಕೇಳುಗರ ಮನದಲ್ಲಿ ಸದಾ ಗುನುಗುತ್ತಿವೆ. ಚಿತ್ರವನ್ನು ಸೆರೆ ಹಿಡಿದಿರವ ಕೃಷ್ಣರವರು ತಮ್ಮ ಅಪ್ರತಿಮ ಪ್ರತಿಭೆಯನ್ನು ತೋರಿದ್ದಾರೆ. ಇವರೆಲ್ಲರ ಜತೆಗೆ ಮೊಲ ಚಿತ್ರಕ್ಕೆ ಮುದ ನೀಡಿದೆ.

ಮೇಲಿನ ಪಟ್ಟಿಯಲ್ಲಿ ಇನ್ನೂ ಯಾರೋ ಒಬ್ಬರು ಕಾಣೆ ಅಲ್ಲವೇ?

ಯಾರದು?

ಚಿತ್ರದುದ್ದಕ್ಕೂ ಹಿನ್ನೆಲೆ ಸಂಗೀತವನ್ನು ನೀಡಿ, ನೋಡುಗರೆಲ್ಲರನ್ನು ತನ್ನ ಹನಿಗಳಲ್ಲಿ ನೆನೆಸುವ ಮಳೆ !! ಚಿತ್ರದಲ್ಲಿ ಮಳೆ ಇಲ್ಲದಿದ್ದರೂ ಚಿತ್ರ ಈ ಪರಿ ಹಿಟ್ ಅಗುತ್ತಿತ್ತೋ ಇಲ್ಲವೋ! ಈ ಮಳೆ ಚಿತ್ರಕ್ಕೆ ವಿಶೇಷ ಮೆರಗನ್ನು ತಂದುಕೊಟ್ಟಿದೆ. ಚಿತ್ರೀಕರಣದಲ್ಲಿ ಇದೇ ಮಳೆ ಚಿತ್ರ ತಂಡದವರಿಗೂ ಹೊಸ ಹುಮ್ಮಸ್ಸನ್ನೂ ನೀಡಿರಬೇಕು.

ಮುಂಗಾರು ಮಳೆಯ ಹನಿಗಳಲ್ಲಿ ನೆನೆದವರ ಮನದಲ್ಲಿ ಚಿತ್ರ ಮಲೆನಾಡಿನ ಕಾಡಿನಂತೆ ಹಚ್ಚ ಹಸಿರಾಗಿದೆ. ಬೇಸಿಗೆಯಲ್ಲಿ ಗಿಡ-ಮರಗಳೊಡೆಯುವ ಹೊಸ ಚಿಗುರಿಗೆ ನೀರೆರೆದು ಆಸರೆಯನ್ನು ನೀಡುವ ಹಾಗೆ, 'ಮುಂಗಾರು ಮಳೆ' ಹೊಸ ಪ್ರತಿಭೆಗಳಿಗೆ ಆಸರೆಯನ್ನು ನೀಡಿದೆ. ಹೊಸಬರ ಅನಾವರಣಕ್ಕೆ ನಾಂದಿ ಹಾಡಿದೆ.

"ಹೊಸ ಚಿಗುರು, ಹಳೆ ಬೇರು ಕೂಡಿರಲು ಮರ ಸೊಬಗು".. ಎಷ್ಟು ನಿಜ ಅಲ್ಲವೇ?

Read More @ Mungaru Male

0 Comments:

Post a Comment

Subscribe to Post Comments [Atom]

<< Home