ಕನ್ನಡ - ಕನ್ನಡಿಗ
ಪ್ರತಿ ವರ್ಷದಂತೆ ಈ ಬಾರಿಯೂ ನವೆಂಬರ್ ೧ ಬಂದಿತು. ನಾವು ಕನ್ನಡ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಿದೆವು. ಈ ಬಾರಿಯ ರಾಜ್ಯೋತ್ಸವಕ್ಕೆ ಸುವರ್ಣ ವರ್ಷಾಚರಣೆಯ ಗರಿ ಕೂಡ. ಹಾಗಾಗಿ ಈ ಬಾರಿಯ ರಾಜ್ಯೋತ್ಸವ ಇನ್ನೂ ಸ್ವಲ್ಪ ಹೆಚ್ಚಿನ ಅದ್ಧೂರಿತನದಿಂದ ಕೂಡಿತ್ತು. ಶಾಲೆಯಲ್ಲಿದ್ದಾಗ, ಹಾಸ್ಟೆಲ್ ನಲ್ಲಿ ಇದ್ದಾಗ ನಡೆಯುತ್ತಿದ್ದ ಆಚರಣೆ ಅಂದರೆ - ಕರೆಸುತ್ತಿದ್ದ ಅತಿಥಿಗಳಿಂದ ಕನ್ನಡ ಧ್ವಜಾರೋಹಣ, ನಾನೂ ಕೂಡ ಕೆಲವು ಕನ್ನಡದ ಹಾಡುಗಳನ್ನು ಹೇಳುತ್ತಿದ್ದೆ, ಕೆಲವರಿಂದ ಅದೇ ಭಾಷಣಗಳ ಪುನರಾವರ್ತನೆ, ನಂತರ ಸಿಹಿ ತಿನಿಸು !!!! ಅಷ್ಟೆ.
ಆದರೆ ಈ ಬಾರಿ ಅದೇಕೋ ಹತ್ತು ಹಲವು ಆಲೋಚನೆಗಳು ನನ್ನನ್ನು ಕಾಡುತ್ತಿವೆ. ಕನ್ನಡ, ಕರ್ನಾಟಕ, ಭಾಷಾಭಿಮಾನ .....
ಆದರೆ ಈ ಬಾರಿ ಅದೇಕೋ ಹತ್ತು ಹಲವು ಆಲೋಚನೆಗಳು ನನ್ನನ್ನು ಕಾಡುತ್ತಿವೆ. ಕನ್ನಡ, ಕರ್ನಾಟಕ, ಭಾಷಾಭಿಮಾನ .....
ಇಂದಿನ ಕನ್ನಡ ದಿನ ಪತ್ರಿಕೆಗಳು ಕರ್ನಾಟಕಮಯ. ಇಂಗ್ಲೀಷ್ ಪತ್ರಿಕೆಗಳಲ್ಲಿಯೂ ಸುವರ್ಣ ರಾಜ್ಯೊತ್ಸವದ ಬಗ್ಗೆ ವಿಶೇಷ ಲೇಖನಗಳು. ನೋಡಿ ಬಹಳ ಸಂತೋಷವಾಯಿತು. ಪತ್ರಿಕೆಗಳಲ್ಲಿ ಕರ್ನಾಟಕದ ವೈಶಿಷ್ಟ್ಯ, ಕನ್ನಡದ ಇತಿಹಾಸ, ಕನ್ನಡಿಗರ ಸಾಧನೆಗಳ ಬಗ್ಗೆ ಲೇಖನಗಳಿವೆ. ಕರ್ನಾಟಕ ಹೇಗೆ ಉದಯವಾಯಿತು ಎಂದು ಓದಿ ಆಶ್ಚರ್ಯವೂ ಆಯಿತು. ನಮ್ಮ ಶಾಲೆಯ ಸಮಾಜ ವಿಜ್ಞಾನದಲ್ಲಿ ಉಲ್ಲೇಖಿಸುವ ಭಾರತದ ಇತಿಹಾಸ ಭಾರತ ಸ್ವಾತಂತ್ರ್ಯಕ್ಕೆ ಬಂದು ನಿಲ್ಲುತ್ತದೆ. ನನಗೆ ಈಗಲೂ ಕೂಡ ಸ್ವಾತಂತ್ರ್ಯದ ನಂತರ ನಮ್ಮ ದೇಶದಲ್ಲಿ ನಡೆದ ಘಟನೆಗಳು ಸರಿಯಾಗಿ ಗೊತ್ತಿಲ್ಲ. ನಮ್ಮ ದೇಶದಲ್ಲಿ ರಾಜ್ಯಗಳ ಪುನರ್ವಿಂಗಡಣೆ ಹೇಗಾಯಿತು ಎಂಬುದೂ ಗೊತ್ತಿಲ್ಲ. ಹಾಗಾಗಿ ಕರ್ನಾಟಕದ ಏಕೀಕರಣಕ್ಕೆ ಹೋರಾಡಿದ ಮಹನೀಯರು ತಿಳಿದಿಲ್ಲ. ಇನ್ನು ಮುಂದೆಯಾದರೋ ದೇಶದ ಇತಿಹಾಸದ ಜತೆಗೆ ರಾಜ್ಯದ ಇತಿಹಾಸವನ್ನು ಶಾಲೆಗಳಲ್ಲಿ ಕಲಿಸಲಿ. ಚಿಕ್ಕವರಾಗಿದ್ದಾಗಿಂದಾಗಲೇ ಕರ್ನಾಟಕ, ಕನ್ನಡದ ಮೇಲೆ ಅಭಿಮಾನ ಮೂಡುತ್ತದೆ.
ಕರ್ನಾಟಕಕ್ಕೆ ೨೦೦೦ಕ್ಕೂ ಮೀರಿದ ಇತಿಹಾಸ ಇದ್ದರೂ, ಸ್ವತಂತ್ರ ಭಾರತದಲ್ಲಿ ಕರ್ನಾಟಕ ರಾಜ್ಯ ಉದಯಿಸಿ ೫೦ ವರ್ಷಗಳಾದವು. ಕರ್ನಾಟಕ ಈ ೫೦ ವರ್ಷಗಳಲ್ಲಿ ಹಲವು ಕ್ಷೇತ್ರಗಳಲ್ಲಿ ಸಾಧಿಸಿದೆ, ಬೇರೆ ರಾಜ್ಯಗಳಿಗೆ ಮಾದರಿಯಾಗಿದೆ. ಆದರೆ ಈ ೫೦ ರ ಹೊಸ್ತಿಲಲ್ಲಿರುವ ಕರ್ನಾಟಕದ ಮುಂದೆ ದೊಡ್ಡ ದೊಡ್ಡ ಸವಾಲುಗಳಿವೆ. ಎಲ್ಲಕ್ಕಿಂತ ಆತಂಕ ಹುಟ್ಟಿಸುವುದು ಕರ್ನಾಟಕದಲ್ಲಿ ಕನ್ನಡದ ಸ್ಥಾನ ಮಾನ. ಈಗಿನ ಮಕ್ಕಳ, ಅದರಲ್ಲೂ ಅವರ ತಂದೆ-ತಾಯಂದಿರ ಇಂಗ್ಲೀಷ್ ವ್ಯಾಮೋಹ ನಿಜವಾಗಲೂ ಕನ್ನಡದ ಭವಿಷ್ಯದ ಬಗ್ಗೆ ಭಯ ಹುಟ್ಟಿಸುತ್ತದೆ. ಕನ್ನಡಿಗರೇ ಕನ್ನಡದ ಬಗ್ಗೆ ಒಲವು ತೋರದಿದ್ದರೆ ಬೇರೆಯವರು ತೋರುತ್ತಾರೆಯೇ? ಕನ್ನಡಿಗರಿಗೇ ಇಂದು ಸರಿಯಾಗಿ ಕನ್ನಡ ಬರುವುದಿಲ್ಲವೆಂದರೆ ದುಃಖದ ವಿಷಯ. ಮಕ್ಕಳಿಗೆ ಕನ್ನಡಕ್ಕಿಂತ ಮೊದಲು ಇಂಗ್ಲಿಷ್ ಹೇಳಿ ಕೊಡುವ ತವಕ. ಬಣ್ಣಗಳ ಹೆಸರುಗಳನ್ನೂ ಕೇವಲ ಇಂಗ್ಲೀಷಿನಲ್ಲಿಯೇ ಹೇಳಿ ಕೊಡುತ್ತಾರೆ. ನಿಜ, ಈಗ ಎಲ್ಲಾ ಕ್ಷೇತ್ರಗಳಲ್ಲೂ ಇಂಗ್ಲೀಷ್ ಬೇಕು. ಆದರೆ ಕನ್ನಡ ಬೇಡವೇ ಬೇಡವೆ ? ಏಕೆ ಹೀಗೆ ? ಇದು ಕೇವಲ ಕನ್ನಡ ಎದುರಿಸುತ್ತಿರುವ ಸವಾಲೇ ? ಅಥವಾ ಇಂಗ್ಲೀಷ್ ವಿಶ್ವ ವ್ಯಾಪಿಯಾಗಿರುವುದರಿಂದ ಬೇರೆ ಭಾಷೆಗಳೂ ಇದೇ ಸವಾಲನ್ನು ಎದುರಿಸಿತ್ತಿವೆಯೇ? ಆದರೆ ಎಲ್ಲೂ ಮಾತೃಭಾಷೆಯನ್ನು ಬಿಟ್ಟು ಇಂಗ್ಲೀಷ್ ಅನ್ನು ಕಲಿಯ ಹೊರಟಿರುವುದು ಇದೇ ಮೊದಲು ಎಂದೆನಿಸುತ್ತಿದೆ. ಇದೇ ಕಾರಣದಿಂದಾಗಿ ಈಗಿನ ಮಕ್ಕಳಿಗೆ ಕನ್ನಡದ ಬಗ್ಗೆ ವ್ಯಾಮೋಹವೇ ಇಲ್ಲ. ಕನ್ನಡವನ್ನು ಓದುವುದೆ, ಕನ್ನಡದಲ್ಲಿ ಮಾತನಾಡುವುದು ಕೀಳುಮಟ್ಟದೆಂದುಕೊಂಡಿದ್ದಾರೆ. ಕನ್ನಡ ಪತ್ರಿಕೆಗಳನ್ನಂತೂ ಓದುವುದೇ ಇಲ್ಲ. ಇವಿಷ್ಟೂ ಕನ್ನಡಿಗರ ಮನೆಯಲ್ಲೇ ಆಗುತ್ತಿದೆ.ಹೀಗಿರುವಾಗ ನಾವು ಬೆಂಗಳೂರಿನ ಪರಭಾಷಿಕರಿಗೆ ಕನ್ನಡ ಕಲಿಯಿರಿ ಎಂದು ಯಾವ ಮುಖವನ್ನಿಟ್ಟುಕೊಂಡು ಹೇಳಬೇಕು ???
ಇನ್ನು ಬೆಂಗಳೂರಿನ ವಿಷಯಕ್ಕೆ ಬಂದರೆ, ಭೀತಿ ಹುಟ್ಟುತ್ತದೆ. ಬೆಂಗಳೂರಿನ ಕನ್ನಡಿಗರಿಗೆ ಸ್ವಲ್ಪ ಇಂಗ್ಲೀಷಿನ ವ್ಯಾಮೋಹ ಸ್ವಲ್ಪ ಹೆಚ್ಚೇ. ಕೆಲವೊಮ್ಮೆ "ಇಂಗ್ಲೀಷ್ ಭಾಷೆಯ ಮಧ್ಯೆ ಕನ್ನಡ" ಸೇರಿಸಿದಂತೆ ಭಾಸವಾಗುತ್ತದೆ. ಅಚ್ಚ ಕನ್ನಡದಲ್ಲಿಯೇ ಅಣ್ಣ, ಅಕ್ಕ, ತಂದೆ, ತಾಯಿ ಎಂಬ ಮುದ್ದಾದ ಪದಗಳಿದ್ದರೂ ಇವುಗಳಿಗೂ ಇಂಗ್ಲೀಷಿನ ಮೊರೆ ಹೋಗಬೇಕೆ ? ಇದು ತೀರ ಅತಿಯಾಯಿತಲ್ಲವೆ? ಏಕೆ ಹೀಗಾಗುತ್ತಿದೆ. ಇಂಗ್ಲೀಷ್ ನಲ್ಲಿ ಮಾತನಾಡಿದರೆ ಘನತೆ ಹೆಚ್ಚು ಎಂದುಕೊಂಡಿದ್ದಾರೆ.
ಕನ್ನಡಿಗರು ಕರ್ನಾಟಕದ ರಾಜಧಾನಿಯಲ್ಲಿ ಇರುವುದು ಕೇವಲ ೩೦% ?? ಬೆಂಗಳೂರು ಕರ್ನಾಟಕ ಗಡಿಯಲ್ಲಿದೆ ಹೌದು. ಹಾಗೆ ಬೇರೆ ರಾಜ್ಯಗಳಿಂದ ಇಲ್ಲಿಗೆ ಬಂದಿರುವವರ ಸಂಖ್ಯೆಯೂ ಹೆಚ್ಚು. ಆದರೆ ತಮಿಳುನಾಡಿನ ಚೆನ್ನೈ ಕೂಡ ಗಡಿಭಾಗದಲ್ಲೇ ಇದೆ. ಅಲ್ಲೂ ಕೂಡ ತೆಲುಗು, ಕನ್ನಡಿಗರು, ಮಲಯಾಳಿಗಳ ಸಂಖ್ಯೆ ಹೆಚ್ಚೇ. ಆದರೆ ಅವರೆಲ್ಲರೂ ತಮಿಳನ್ನು ಅಪ್ಪಿಕೊಂಡಿದ್ದಾರೆ. ಅದೇ ತೆಲುಗು, ಮಲಯಾಳಿ, ತಮಿಳಿನವರು ಬೆಂಗಳೂರಿನಲ್ಲಿ ಏಕೆ ಕನ್ನಡವನ್ನು ಅಪ್ಪಿಕೊಂಡಿಲ್ಲ? ಏಕೆ ಈ ವಿಪರ್ಯಾಸ. ಇದಕ್ಕೆಲ್ಲಾ ನಾವು 'ಕನ್ನಡಿಗರ ವಿಶಾಲ ಮನೋಭಾವ' ಎಂಬಿತ್ಯಾದಿ ವಿವರಣೆಗಳನ್ನು ಕೊಟ್ಟು ಸುಮ್ಮನಾಗುತ್ತೇವೆ. ಕನ್ನಡಿಗರೇ ಕನ್ನಡ ಭಾಷೆಯನ್ನಾಡಲು ಕೀಳರಿಮೆ ಪಟ್ಟರೆ, ಬೇರೆಯವರು ಕನ್ನಡವನ್ನು ಕಲಿಯಲು ಪ್ರಯತ್ನಿಸಿಯಾರೆ ?
ಈ ಎಲ್ಲಾ ಪ್ರಶ್ನೆಗಳಿಗೆ ಮೂಲ ಕಾರಣ ಕನ್ನಡಿಗರಿಗೆ ಕನ್ನಡದ ಮೇಲಿನ 'ನಿರಭಿಮಾನ'. ಹೌದು ನಿರಭಿಮಾನ. ಈಗಿನ ಮಕ್ಕಳ ಇಂಗ್ಲೀಷ್ ವ್ಯಾಮೋಹ ನೋಡಿದರೆ ಎಲ್ಲಿ ೨೦೦೦ ವರ್ಷಗಳಿಂದ ಉರಿಯುತ್ತಿರುವ ಕನ್ನಡದ ದೀಪ ಮುಂದೆ ಆರಿಹೋಗುತ್ತದೋ ಎಂದು ಆತಂಕವಾಗುತ್ತದೆ. ಕನ್ನಡದ ದೀಪ ಮುಂದೆಯೂ ಸದಾ ಉರಿಯುತ್ತಿರಲು ಬೇಕಾಗಿರುವುದು ಇಷ್ಟೆ - ಕನ್ನಡದ ಮೇಲಿನ ಪ್ರೀತಿ, ಅಭಿಮಾನ. ಅಷ್ಟೆ !! ಕನ್ನಡವಿಲ್ಲದಿದ್ದರೆ - ಕನ್ನಡಿಗ ಪದಕ್ಕೆ ಅರ್ಥವಿದೆಯೇ? ಕನ್ನಡವಿರುವವರೆಗಷ್ಟೇ ಕನ್ನಡಿಗನಿರಲು ಸಾಧ್ಯ!!
ಜಯ ಭಾರತ ಜನನಿಯ ತನುಜಾತೆ
ಜಯ ಹೇ ಕರ್ನಾಟಕ ಮಾತೆ
0 Comments:
Post a Comment
Subscribe to Post Comments [Atom]
<< Home